ಪುಣ್ಯಸ್ಥಳದ ದಿವ್ಯ ಚೇತನ- ಶ್ರೀ ಶ್ರೀ ರಾಘವೇಂದ್ರ ಗುರೂಜಿ ಅವರ ಜ್ಞಾನಗಂಗೆ

05.03.26 04:54 PM - Comment(s)

ನಮ್ಮ ಬದುಕಿನ ದಾರಿಯಲ್ಲಿ ಗುರುವಿನ ಸಾನ್ನಿಧ್ಯವು ಕತ್ತಲೆಯಲ್ಲಿ ಬೆಳಗುವ ದೀಪದಂತೆ. ಮಂತ್ರಾಲಯದ ಶ್ರೀ ರಾಘವೇಂದ್ರ ಮಹಾಸ್ವಾಮಿಗಳ ಪರಮಾನುಗ್ರಹದಿಂದ ಮೂಡಿಬಂದ *ಪುಣ್ಯಸ್ಥಳ* ಇಂದು ಲಕ್ಷಾಂತರ ಭಕ್ತರ ಪಾಲಿನ ಜಾಗೃತ ಸ್ಥಾನವಾಗಿದೆ. ಗುರೂಜಿಯವರ ದೂರದೃಷ್ಟಿ ಮತ್ತು ಅವರ ದಿವ್ಯ ಸಂಕಲ್ಪದ ಕುರಿತು ಕೆಲವು ಚಿಂತನೆಗಳು ಇಲ್ಲಿವೆ -


ಜೀವನೋಪಯೋಗಿ ವ್ಯಾಖ್ಯೆ - ಗುರೂಜಿಯವರು ಕೇವಲ ಉಪದೇಶ ನೀಡಲಿಲ್ಲ, ಬದಲಾಗಿ ಬದುಕುವ ಕಲೆಯನ್ನು ಕಲಿಸಿಕೊಟ್ಟರು.

ವ್ಯಾವಹಾರಿಕ ಸಾಧನೆ - ಭಕ್ತರು ಲೌಕಿಕ ಜೀವನದಲ್ಲಿ ಎದುರಿಸುವ ಸಂಕಷ್ಟಗಳಿಗೆ ಆಧ್ಯಾತ್ಮಿಕ ಪರಿಹಾರಗಳನ್ನು ಸರಳವಾಗಿ ತಿಳಿಸಿಕೊಟ್ಟರು.
ಅಭ್ಯಾಸ ಕ್ರಮ - ಭಕ್ತಿಯನ್ನು ಮೂಢನಂಬಿಕೆಯಾಗಿಸದೆ, ಅದನ್ನು ನಿತ್ಯ ಜೀವನದ ಶಿಸ್ತಾಗಿ ಹೇಗೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ.
ಜೀವನ ವಿಜ್ಞಾನ ಮತ್ತು ವಿದ್ಯಾ ದಾನ - ನಮ್ಮ ಸನಾತನ ಧರ್ಮದ ಪ್ರತಿಯೊಂದು ಆಚಾರ-ವಿಚಾರಗಳ ಹಿಂದೆ ಒಂದು ವೈಜ್ಞಾನಿಕ ಹಿನ್ನೆಲೆ ಇರುತ್ತದೆ ಎಂಬುದನ್ನು ಗುರೂಜಿ ಮನವರಿಕೆ ಮಾಡಿಕೊಟ್ಟರು. ಯಾವುದೇ ಗುರುದಕ್ಷಿಣೆಯ ಅಪೇಕ್ಷೆಯಿಲ್ಲದೆ, ಅವರು ಮಾಡಿದ ಈ ವಿದ್ಯಾ ದಾನವು ಭಕ್ತರ ಪಾಲಿಗೆ ಜ್ಞಾನದ ಭಂಡಾರವಾಗಿದೆ. ಗುರುವಿನ ಜ್ಞಾನವು ಅಹಂಕಾರವನ್ನು ಕಳೆಯುವ ಸಾಧನವಾಗಬೇಕು ಮತ್ತು ಅದು ಸಮಾಜದ ಪ್ರತಿಯೊಬ್ಬರಿಗೂ ತಲುಪಬೇಕು ಎಂಬುದೇ ಗುರೂಜಿಯವರ ಮೂಲ ಆಶಯವಾಗಿತ್ತು.
ದೃಷ್ಟಾಂತ ದರ್ಪಣ - ಸಮಾನತೆಯ ಸಂದೇಶ, ಗುರೂಜಿಯವರ ಯೋಚನಾ ಶಕ್ತಿಗೆ ಯಾರೂ ಸರಿಸಮಾನರಲ್ಲ. ಅವರು ಎಲ್ಲಾ ಜಾತಿ, ಮತ ಮತ್ತು ಧರ್ಮಗಳನ್ನು ಸಮಾನವಾಗಿ ಗೌರವಿಸಿದರು. ಇದಕ್ಕೆ ಸಾಕ್ಷಿಯಾಗಿ ಪುಣ್ಯಸ್ಥಳದಲ್ಲಿ *ಪಂಚ ಪವಿತ್ರ ಧರ್ಮಗ್ರಂಥಗಳ ಪೂಜೆ* ನಿರಂತರವಾಗಿ ನಡೆಯುತ್ತಿದೆ. ಇದು ಸಮಾಜಕ್ಕೆ ಅವರು ನೀಡಿದ ಸಮನ್ವಯದ ಸಂದೇಶಕ್ಕೆ ಹಿಡಿದ ಕೈಗನ್ನಡಿ

ದೈವೀಶಕ್ತಿಯ ಜಾಗೃತ ಸ್ಥಾನ ರಾಯರ ಬೃಂದಾವನದ ಸಾನ್ನಿಧ್ಯದಿಂದ ಪಾವನವಾಗಿರುವ ಈ ಕ್ಷೇತ್ರವು ಭಕ್ತರಿಗೆ ಇಂದು ಸ್ವರ್ಗ ಸಮಾನವಾಗಿದೆ. ಇಲ್ಲಿನ ಆಧ್ಯಾತ್ಮಿಕ ಪ್ರವಚನಗಳು ಮತ್ತು ಅನುಗ್ರಹವು ಪ್ರತಿ ಕ್ಷಣವೂ ಭಕ್ತರನ್ನು ಕಾಯುತ್ತಿದೆ. ಗುರೂಜಿಯವರ ಆಲೋಚನೆಗಳು 'ನಿತ್ಯ ನೂತನ' ಹಾಗೂ 'ಚಿರಂತನ'.

ನನ್ನ ಮನದಂಗಳದಲ್ಲಿ ಮೂಡಿದ ಈ ಸಾಲುಗಳು ಆ ಮಹಾನ್ ಚೇತನಕ್ಕೆ ಅರ್ಪಿತ. ಅವರ ಪ್ರೇರಣೆಯಿಲ್ಲದೆ ಇಂತಹ ಶಬ್ದಗಳ ಚಿಂತನ ಅಸಾಧ್ಯ. ಪುಣ್ಯಸ್ಥಳದ ಈ ದಿವ್ಯ ಶಕ್ತಿಯು ಎಲ್ಲರಿಗೂ ಮಂಗಳವನ್ನುಂಟು ಮಾಡಲಿ.

ಅವರಿಲ್ಲದೇ ನಾನಿಲ್ಲಿ, ಅವರಿಂದಲೇ ಇದು ಎಲ್ಲ.
- Manisha Imandar, Baroda